ಕಲೆಗಾಗಿ ಕಲೆ

ಕಲಾಕೃತಿ ತನ್ನಷ್ಟಕ್ಕೆ ತಾನೆ ಹುಟ್ಟಿಬರುತ್ತದೆ. ತನಗೋಸ್ಕರವೇ ಇರುತ್ತದೆ. ಅದರ ಉತ್ಪತ್ತಿಗೆ ಮತ್ತಾವ ನಿಮಿತ್ತವೂ ಇಲ್ಲ, ಮತ್ತಾವ ಉದ್ದೇಶವೂ ಅದರಿಂದ ಸಫಲವಾಗುವುದಿಲ್ಲ. ಹೀಗೆಂಬುದು ಕಲೆಗಾಗಿ ಕಲೆಯೆಂಬ ಸೂತ್ರದ ಸಾರ. ಬಹು ಗಲಭೆಯನ್ನೆಬ್ಬಿಸಿರುವ ಈ ವಾದ 19 ನೆಯ ಶತಮಾನದಲ್ಲಿ ಮೊದಲು ಫ್ರಾನ್ಸಿನಲ್ಲಿ ತಲೆದೋರಿ ಕ್ರಮೇಣ ವೃದ್ಧಿ ಹೊಂದಿತು. ಸಂಗೀತದ ವಿಚಾರವಾಗಿ ಈ ತತ್ತ್ವಕ್ಕೆ ಸರ್ವರ ಸಮ್ಮತಿ ಹಿಂದಿನಿಂದಲೂ ಇತ್ತು. ಆದರೆ 1830-1840 ರ ದಶಕಗಳಲ್ಲಿ ಫ್ರಾನ್ಸಿನ ಚಿತ್ರಕಾರರ ಒಂದು ಕೂಟದವರು (ದಿ ಬಾರ್ಬಿಸóನ್ ಸ್ಕೂಲ್) ತಮ್ಮ ಕಲೆಗೂ ಅಂಥ ಸ್ವತಂತ್ರ ಸ್ಥಾನವನ್ನು ಗಳಿಸಿ ಕೊಡಲು ಹಾತೊರೆದರು. ದೃಶ್ಯವೊಂದರ ವರ್ಣಚಿತ್ರವನ್ನು ಸಂದರ್ಶಿಸುವಾಗ ಅದು ಹೇಗೆ ಸ್ವಾರಸ್ಯವತ್ತಾಗಿ ರಚಿತವಾಗಿದೆ ಎಂಬುದನ್ನು ಲೆಕ್ಕಿಸಬೇಕು, ತೃಪ್ತಿತಾಳಬೇಕು. ಆ ಚಿತ್ರ ಯಾವ ಸಂದೇಶವನ್ನು ನೀಡುತ್ತದೆ ಎಂದು ಪ್ರಯತ್ನಿಸಬಾರದು. ಈ ಬಗೆಯ ಗಟ್ಟಿ ಕೂಗಿನಿಂದ ಜನತೆಯಲ್ಲಿ ಆಂದೋಳನ ಉಂಟಾಯಿತು. ಸಾಹಿತ್ಯ ಲೋಕಕ್ಕು ಅದರ ಅಲೆಗಳು ಉರುಳಿ ಬಂದವು. ಥಿಯೊಫೈಲ್ ಗೌತಿಯರ್ (1811-72) ಕಲೆಗಾಗಿ ಕಲೆ ಎಂಬ ಧ್ಯೇಯ ಮಂತ್ರವನ್ನು 1852 ರಲ್ಲಿ ಸಾರಿದ. ನುರಿತ ಅಕ್ಕಸಾಲೆ ನಾಜೂಕು ನಗವನ್ನು ತಯಾರಿಸುವ ಚಾಕಚಕ್ಯತೆಯಂತೆ ತನ್ನ ಕವಿತೆಯನ್ನು ತಾನು ರಚನೆಗೈಯುವುದಾಗಿ ಆತ ಹೇಳುತ್ತಿದ್ದ. ಅವನಿಗಿಂತ ಕೊಂಚ ಚಿಕ್ಕವನಾದ ಚಾರಲ್ಸ್ ಬೋದಿಲೇರ್ (1821-1867) ಆ ಮಂತ್ರಕ್ಕೆ ದೃಢವಾದ ಬೆಂಬಲವನ್ನು ಕೊಟ್ಟ. ಅವನ ಲೆ ಫ್ಲೂರ್ ದು ಮಾಲ್ (1857) ಶಬ್ದ ಸಂಯೋಜನೆಯ ದೃಷ್ಟಿಯಿಂದ, ರಮ್ಯ ಕಲೆಯ ದೃಷ್ಟಿಯಿಂದ ಅತ್ಯುತ್ಕøಷ್ಟ ಕವನಸಂಗ್ರಹ.

ಹಲಕೆಲವು ರೀತಿನೀತಿಗಳಲ್ಲಿ ಫ್ರಾನ್ಸಿನ ಮೇಲ್ಪಂಕ್ತಿಯನ್ನು ಅನುಸರಿಸುವುದು ಯೂರೋಪಿನ ಇತರ ದೇಶಗಳಿಗೂ ಅಮೆರಿಕ ಸಂಯುಕ್ತ ಸಂಸ್ಥಾನಕ್ಕೂ ಒದಗಿಬಂದ ವಾಡಿಕೆ. ಇಂಗ್ಲೆಂಡಿನಲ್ಲಿ ಸ್ವಿನ್‍ಬರ್ನ್ (ಸು.1866), ಪೇಡರ್ ಮುಂತಾದ ಕವಿಗಳೂ ವ್ಹಿಸ್ಲರ್ (ಸು.1885) ಮುಂತಾದ ಚಿತ್ರಕಾರರು ತೀವ್ರವಾದ ಹೇಳಿಕೆಗಳನ್ನೂ ಪ್ರಯೋಗಗಳನ್ನೂ ಮಾಡಲಾರಂಭಿಸಿದರು. ಅವರಿಗೆ ಪ್ರಬಲ ವಿಮರ್ಶಕನಾದ ಮ್ಯಾಥ್ಯೂ ಆರ್ನಲ್ಡನ ಮೇಲೆ ತುಂಬ ಕಾರ. ಏತಕ್ಕೆಂದರೆ ಆತ ಕಾವ್ಯವಸ್ತು, ಅದರ ಘನಗಾಂಭೀರ್ಯ, ಭವ್ಯತೆ, ಅದು ಬೋಧಿಸುವ ಶೀಲ ಧರ್ಮ ಇತ್ಯಾದಿ ಅಂಶಗಳನ್ನು ಪುನಃ ಪುನಃ ಒತ್ತಿ ಹೇಳುತ್ತಿದ್ದ. ಅದರಿಂದಾಗಿ ಸಾಹಿತ್ಯ ಲೋಕದಲ್ಲಿ ವಿಪುಲವಾದ ಚರ್ಚೆಗೆ ಅವಕಾಶ ಲಭಿಸಿತು.

ದುರದೃಷ್ಟದಿಂದ ಇಳಿಗತಿ (ಡೆಕಡೆನ್ಸ್) ಎಂಬ ಇನ್ನೊಂದು ಅಭಿಪ್ರಾಯ ಅದೇ ಸಮಯದಲ್ಲಿ ಎದ್ದು ಬಂದು, ಕಲೆಗಾಗಿ ಕಲೆ ಎಂಬುದರೊಡನೆ ನೆಂಟು ಪಡೆಯಿತು. (ನೋಡಿ- ಇಳಿಗತಿ). ಈ ಎರಡೂ ದೂಷ್ಯವಾದುವು. ಏಕಾಗ್ರ ಚಿತ್ತದಿಂದ ಕಲೆಗಾರ ತನ್ನ ಕೃತಿಯನ್ನು ಸೃಜಿಸ ಹೊರಟರೆ ಅದೆಂದಿಗೂ ತಪ್ಪಲ್ಲ. ಆದರೆ ಅವನ ಕಲೆಗಾರಿಕೆ ಬರಿಯ ಕಾಮವಿಕಾರ, ಅತಿಚರ್ಯೆ, ಸ್ವೇಚ್ಛೆಯಾದ ದುಷ್ಟತನ-ಇತ್ಯಾದಿಗಳಿಗೇ ಸೊಗಸನ್ನು ಅಂಟಿಸುವ ಪ್ರಯತ್ನಕ್ಕೆ ಮೀಸಲಾದರೆ ಕಷ್ಟ. ಬೋದಿಲೇರಿನ ಕೆಡುಕಿನ ಹೂಗಳು ಸ್ವಿನ್‍ಬರ್ನನ ಆಳ್ವಿಕೆಯಲ್ಲಿ ದುರಾಚಾರದ ಗುಲಾಬಿಗಳೂ ಸಮ್ಮೋದಾವೇಶಗಳೂ (ದಿ ರೋಸಸ್ ಅಂಡ್ ರ್ಯಾಪ್ಚರ್ಸ್ ಆಫ್ ವೈಸ್) ಆದದ್ದು ಸಾಹಿತ್ಯದ ಹೀನ ಭಾಗ್ಯ.

ನೀತಿಬೋಧೆಗಾಗಿ, ಧರ್ಮಪ್ರಚಾರಕ್ಕಾಗಿ, ಪ್ರಭು ಪ್ರಶಂಸೆಗಾಗಿ, ಅಥವಾ ಕಲೆಗಾರನ ಸ್ವಂತ ಪ್ರಯೋಜನಕ್ಕಾಗಿ, ಪ್ರಶಸ್ತಿಗಾಗಿ ಹಿಂದೆ ಸಾಹಿತ್ಯಾದಿ ಲಲಿತಕಲೆಗಳು ಅವಶ್ಯಕವಾಗಿದ್ದುವು- ಯಾವುದೋ ಒಂದು ಸಾಮಾಜಿಕ ಧ್ಯೇಯ ಕಲೆಯನ್ನು ನಡೆಸದಿದ್ದರೆ ಅದು ವೃಥಾ ಅರಣ್ಯರೋಧನವಾದೀತು ಎಂಬುದು ಮಂದಿಯ ನಂಬಿಕೆಯಾಗಿತ್ತು. ಈಗ ಸರ್ವಾಧಿಕಾರಕ್ಕೆ ಅಥವಾ ಸಮತಾವಾದಕ್ಕೆ ಒಳಗಾದ ರಾಷ್ಟ್ರಗಳ ಹೊರತು ಮಿಕ್ಕೆಲ್ಲ ರಾಷ್ಟ್ರಗಳಲ್ಲೂ ಆ ನಂಬಿಕೆ ಸಡಿಲಹೋಗಿದೆ.

 ಕಲಾ ಪ್ರಪಂಚದಲ್ಲಿ ಈ ವಿಧದ ಸ್ವಾತಂತ್ರ್ಯದಾಹ ಉಲ್ಬಣವಾದುದಕ್ಕೆ ಕಾರಣಗಳು ಹಲವಾರು. ಕಲಾಕೃತಿಯ ಅಪೇಕ್ಷೆ ಜನ ಸಂದೋಹದಲ್ಲಿ ಹೆಚ್ಚು ಹೆಚ್ಚಾಗಿ ಬೆಳೆದಿದ್ದರಿಂದ ಕಲೆಗಾರನಿಗೆ ಆಶ್ರಯದಾತನ ಹಂಗು ಕಡಿಮೆಯಾಯಿತು. ಸಾವಿರಾರು ಮಂದಿ ದುಡ್ಡು ಕೊಟ್ಟು ಸಂಗೀತವನ್ನು ಆಲಿಸುತ್ತಾರೆ. ಚಿತ್ರಗಳನ್ನು ವೀಕ್ಷಿಸುತ್ತಾರೆ, ಪುಸ್ತಕವನ್ನು ಕೊಂಡು ಓದುತ್ತಾರೆ. ಕಲೆಗಾರ ಶುದ್ಧ ಸೋಮಾರಿ, ಒಂದು ಕಡ್ಡಿಯನ್ನು ಆ ಕಡೆಯಿಂದ ಈ ಕಡೆಗೆ ಎತ್ತಿಡಲಾರದ ಪರಾವಲಂಬಿ, ಸಮಾಜಕ್ಕೆ ಹೊರೆ-ಎಂಬ ಅಭಿಶಾಪ ಬಹುಮಟ್ಟಿಗೆ ಕಣ್ಮರೆಯಾಗಿದೆ. ಪ್ರಜಾಪ್ರಭುತ್ವ ಅನೇಕ ಪ್ರದೇಶಗಳಲ್ಲಿ ಏರ್ಪಟ್ಟಿರುವುದರಿಂದ ಕಲೆಗಾರನಿಗೂ ಹಕ್ಕುಗಳು ಸಂದು ಬಂದಿವೆ. ಕೇವಲ ಸಾಂಪ್ರದಾಯಿಕವಾದರೆ, ಚರ್ವಿತವರ್ಣವಾದರೆ, ಕಲೆಗೆ ಪ್ರಗತಿಯಿಲ್ಲ, ಶ್ರೇಯಸ್ಸುಬಾರದು-ಎಂಬ ಸತ್ಯಾಂಶ ನೈಜ ಕಲೆಗಾರರಿಗೆ ಮಂದಟ್ಟಾಗಿದೆ. ಅದಕ್ಕೋಸ್ಕರ ಹಳೆಯದನ್ನು ಬಿಡದೆ ಹೊಸದನ್ನು ನಿರ್ಮಿಸುವ ಹುರುಪು ಅವರ ಮುಖ್ಯ ಲಕ್ಷಣವಾಗಿದೆ.

ಹೀಗೆಂದ ಪಕ್ಷಕ್ಕೆ ಈ ವಿಷಯವಾಗಿ ಇದಮಿತ್ಥಂ ಎಂದು ತೀರ್ಮಾನ ನುಡಿಯಬಹುದು ಎಂದು ಯಾರೂ ಊಹಿಸಬಾರದು. ವಿಷಯ ದಿಟವಾಗಿ ಜಟಿಲವಾದದ್ದು. ಕವಿಗೆ ಸಮಾಜ ಬೇಕು, ಓದುಗರೂ ಬೇಕು. ಎಂದಮೇಲೆ ಸಮಾಜವನ್ನೂ ಓದುಗರನ್ನೂ ಮನವೊಪ್ಪಿಸುವ ಹೊಣೆಗಾರಿಕೆ ಅವನ ಮೇಲಿದೆ ಎಂದಂತಾಯಿತು. ಕವಿಗೆ ಯಾವ ಬಗೆಯ ಸ್ವಾತಂತ್ರ್ಯ, ಎಷ್ಟರಮಟ್ಟಿಗೆ-ಇತ್ಯಾದಿ ಸಮಸ್ಯೆಗಳಿಂದ ಈ ವಿಚಾರ ನಿಬಿಡವಾಗಿದೆ. ಆಯಾ ತಲೆಮಾರು, ಆಯಾ ದೇಶ, ಸೂಕ್ತವಾಗಿ ಸಮಸ್ಯೆಗಳನ್ನು ಬಿಡಿಸಿಕೊಳ್ಳಬೇಕು. ಈಗ ಕಟು ಆಕ್ಷೇಪಣೆಯಾಗಲಿ ಕಹಿ ವಾಗ್ವಾದವಾಗಲಿ ಕಾಣಬರುತ್ತಿಲ್ಲ.

ಒಟ್ಟಿನಲ್ಲಿ, ಕಲೆಗಾಗಿ ಕಲೆ ಎಂಬ ಘೋಷಣೆಯಿಂದ ಒಂದೆರಡು ಸತ್ಫಲಗಳೇ ದೊರೆತು ಬಂದಿವೆ. ತನ್ನ ವೃತ್ತಿಯನ್ನು ಕುರಿತು ಕಲೆಗಾರನಿಗೆ ಜವಾಬ್ದಾರಿ. ರಸಿಕವರ್ಗಕ್ಕೆ ಕಲೆಗಾರರನ್ನು ಕಂಡು ಗೌರವ ಇರಬೇಕಾದ್ದು ನಿರ್ವಿವಾದ. ಕಾವ್ಯಕೃತಿಯ ವಸ್ತುವಾದ ಭಾವ ಭಾವನೆಗಳ ಸಮುದಾಯ ಎಷ್ಟೇ ಪ್ರಮುಖವಾದರೂ ಅವುಗಳ ಸಂಯೋಜನೆ ನಿರೂಪಣೆಯ ವಿಧಾನ, ಶಬ್ದ ಸಂಪತ್ತು, ಶೈಲಿ ಮುಂತಾದ ಕಾವ್ಯಾಂಗಗಳನ್ನೂ ಕಾವ್ಯದ ಘನೋದ್ದೇಶವನ್ನೂ ಅಲಕ್ಷಿಸುವಂತಿಲ್ಲ. ಇದು ಗೃಹೀತ ತತ್ತ್ವವಾಗಿದೆ. 

          

(ಎಸ್.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ